ಇಕಾರಸ್-
	ಕ್ಷುದ್ರಗ್ರಹಗಳಲ್ಲಿ (ಆಸ್ಟರಾಯ್ಡ್ಸ್) ಒಂದು. ಇದರ ಕಕ್ಷೆ ಬಲು ಚಿಕ್ಕದು, ಅವಧಿ (ಸೂರ್ಯನನ್ನು ಒಂದು ಸಲ ಪರಿಭ್ರಮಿಸಲು ಬೇಕಾಗುವ ಕಾಲ) ಅತಿಕನಿಷ್ಠ (409 ದಿವಸಗಳು). ಈ ಗ್ರಹಗಳ ಸಾಮೂಹಿಕ ವ್ಯಾಪ್ತಿ ಮಂಗಳ ಮತ್ತು ಗುರು ಕಕ್ಷೆಗಳ ನಡುವಿನ ವಲಯ. 

ಚಿತ್ರ-1

ಆದರೆ ಹಲವಾರು ಬಿಡಿ ಸದಸ್ಯರ ಕಕ್ಷೆಗಳು ಇದಕ್ಕೆ ಅಪವಾದವಾಗಿರುವುದುಂಟು. ಇಕಾರಸ್ ಕಕ್ಷೆ ಇಂಥ ಒಂದು ಅಪವಾದ. ಇದು ಸೂರ್ಯ ಸಮೀಪಗ್ರಹವಾದ ಬುಧ ಕಕ್ಷೆಯನ್ನೂ ದಾಟುವುದು-ಎಂದರೆ ನಿಯತಕಾಲಿಕ ಆಕಾಶಕಾಯಗಳಲ್ಲಿ ಸೂರ್ಯನನ್ನು ಇಕಾರಸಿಗಿಂತ ಹತ್ತಿರವಾಗಿ ಹಾದುಹೋಗುವ ಇನ್ನೊಂದಿಲ್ಲ. ಆಗ ಸೂರ್ಯನಿಂದ ಇದರ ದೂರ ಸುಮಾರು 19 ದಶಲಕ್ಷ ಕಿ.ಮೀ.ಗಳು. 1949ರ ಜೂನಿನಲ್ಲಿ ಅಮೆರಿಕದ ಪಾಲೊಮಾರ್ ವೀಕ್ಷಣಾಲಯದ ಖಗೋಳ ವಿಜ್ಞಾನಿ ವಾಲ್ವರ್ ಬಾಡೇ ಆಕಾಶದ ಛಾಯಾಚಿತ್ರವೊಂದನ್ನು ವಿಶ್ಲೇಷಿಸುತ್ತಿದ್ದಾಗ ಇಕಾರಸಿನ ಅಸ್ತಿತ್ವ ಕಂಡ. 1968ರ ಜೂನ್ 14ರ ವೇಳೆಗೆ ಇಕಾರಸ್ ಭೂಮಿಯನ್ನು 68,00,000 ಕಿ.ಮೀ.ಗಳಷ್ಟು ಸಮೀಪವಾಗಿ ಹಾದು ಹೋಯಿತು.
(ನೋಡಿ- ಕ್ಷುದ್ರಗ್ರಹಗಳು)											

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ